ಗ್ರಾಮಾಧಿಕಾರಿಗಳು-
	ಗ್ರಾಮಸ್ಥರಿಂದ ಕಂದಾಯದ ವಸೂಲಿ, ಗ್ರಾಮದ ಸುವ್ಯವಸ್ಥೆಯ ಪಾಲನೆ ಮುಂತಾದ ಕರ್ತವ್ಯಗಳ ನಿರ್ವಹಣೆಗಾಗಿ ಸರ್ಕಾರದಿಂದ ನಿಯುಕ್ತರಾದ ಅಧಿಕಾರಿಗಳು. ಭಾರತದ ಪುರಾತನ ಆಡಳಿತ ವ್ಯವಸ್ಥೆಯ ಒಂದು ಅಂಗ. ಕ್ರಿಸ್ತಶಕದ ಪ್ರಾರಂಭದ ವೇಳೆಗೇ ಇವರು ಅಸ್ತಿತ್ವದಲ್ಲಿದ್ದಂತೆ ಕಾಣುತ್ತದೆ. ಮೊದಲು ಭೂಕಂದಾಯವನ್ನು ಧಾನ್ಯರೂಪದಲ್ಲಿ ಶೇಖರಿಸುವ ಪರಿಪಾಟಿ ಇತ್ತು. ಉತ್ಪನ್ನದ ಒಂದಾರಂಶವನ್ನು (ಷಷ್ಟತಮೋಭಾಗ :) ಅರಸನಿಗೆ ತೆರಿಗೆಯಾಗಿ (ಭಾಗದೇಯ, ಕರ, ಬಲಿ) ಕೊಡಬೇಕಾಗುತ್ತಿತ್ತು. ಇದನ್ನು ರೈತರಿಂದ ಶೇಖರಿಸುವ ವ್ಯವಸ್ಥೆಯಲ್ಲಿ ಗ್ರಾಮಾಧಿಕಾರಿಯದು ಪ್ರಮುಖವಾದ ಪಾತ್ರವಾಗಿತ್ತು. ಗ್ರಾಮಾಧಿಕಾರಿ ಹುದ್ದೆ ಇಬ್ಭಾಗವಾಗಿ ಗಾವುಂಡರ್, ಗೌಡ, ಪಟೇಲ ಎಂಬ ಹೆಸರಿನ ಮತ್ತು ಕುಲಕರ್ಣಿ, ಶಾನುಭೋಗ, ಪಟವಾರಿ, ಕರ್ಣಂ,- ಎಂಬ ಹೆಸರಿನ ಎರಡು ಪ್ರತ್ಯೇಕ ಹುದ್ದೆಗಳಾದ್ದು ಪ್ರಾಯಶಃ ಅನಂತರದ ಶತಕಗಳಲ್ಲಿ, ಷೇರ್‍ಷಹ, ಅಕ್ಬರ್, ರಾಜಾ ತೋದರಮಲ್ ಮೊದಲಾದವರೂ ಅನಂತರ ಬ್ರಿಟಿಷರೂ ಕಾರ್ಯರೂಪಕ್ಕೆ ತಂದ ಭೂಕಂದಾಯ, ಭೂಮಾಪನಗಳ ವ್ಯವಸ್ಥೆಯ ಅಂಗವಾಗಿ ಹಣದ ರೂಪದಲ್ಲಿ ಕಂದಾಯದ ವಸೂಲಿ ಪ್ರಾರಂಭವಾದಾಗ ಗ್ರಾಮ ಲೆಕ್ಕಿಗರ ಅಗತ್ಯ ಹೆಚ್ಚಾಗಿ, ಈ ಇಬ್ಭಾಗವಾಗಿರಬೇಕು. ರಾಜಸ್ವ ಅಥವಾ ಕಂದಾಯ ಆಡಳಿತದ ಮೂಲಾಧಾರ. ಗ್ರಾಮಾಧಿಕಾರಿಯ ಆಡಳಿತದ ಯಶಸ್ಸು ಬಹು ಮಟ್ಟಿಗೆ ಅವನ ದಕ್ಷತೆಯನ್ನವಲಂಬಿಸಿರುತ್ತದೆ. ಕುಲಕರ್ಣಿ ಕಂದಾಯದ ಲೆಕ್ಕಪತ್ರ ಮತು ಭೂದಾಖಲೆಗಳನ್ನು ನೋಡಿಕೊಂಡರೆ ಗೌಡ ಗ್ರಾಮದ ಶಾಂತಿ, ಸುವ್ಯವಸ್ಥೆಗಳನ್ನು ನೋಡಿಕೊಂಡು ಕುಲಕರ್ಣಿಗೆ ತೆರಿಗೆ ಶೇಖರಣೆಯಲ್ಲಿ ನೆರವು ನೀಡುತ್ತಾನೆ. ಇವರಿಗೆ ಆವಶ್ಯಕ ಸಹಾಯಕ್ಕಾಗಿ ತೋಟಿ, ತಳವಾರ, ನೀರಗಂಟಿ, ಓಲೇಕಾರ, ಮಹಾರ ಎಂಬ ಹೆಸರಿನ ಕಿರಿಯ ಸೇವಕ ಹುದ್ದೆಗಳೂ ಪ್ರತಿಗ್ರಾಮದಲ್ಲೂ ನೆಲೆಗೊಂಡಿವೆ. ಈ ಎಲ್ಲ ಹುದ್ದೆಗಳೂ ಅನುವಂಶಿಕವಾದವು. ಮೈಸೂರು, ಮದ್ರಾಸು, ಮುಂಬಯಿ, ಹೈದರಾಬಾದು ಆಡಳಿತಗಳಿಗೆ ಸೇರಿದ್ದ ಕರ್ನಾಟಕ ವಿಭಾಗಗಳಲ್ಲಿ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಮೇಲೆ ಹೇಳಿದಂತೆ ಬೇರೆಬೇರೆ ಹೆಸರುಗಳಿದ್ದುವು; ಬೇರೆಬೇರೆ ಕಾನೂನುಗಳೂ ನಿಯಮಾವಳಿಗಳೂ ನೂರಾರು ವರ್ಷಗಳಿಂದ ಜಾರಿಯಲ್ಲಿದ್ದುವು.

	ಗ್ರಾಮಧಿಕಾರಿಗಳು ಸಲ್ಲಿಸುವ ಸೇವೆಗೆ ಕೊಡುವ ಪ್ರತಿಫಲಕ್ಕೆ ಪೋಟಗಿ ಎಂಬ ಹೆಸರಿದೆ. ಗೌಡ, ಕುಲಕರ್ಣಿಗಳಿಗೆ ಆಯಾ ಗ್ರಾಮದ ಕಂದಾಯದ ಸೇಕಡ ಮೂರು ಮತ್ತು ನಾಲ್ಕು ರೂಪಾಯಿಗಳನ್ನು ಅನುಕ್ರಮವಾಗಿ ಪೋಟಗಿ ಎಂದು ಲೆಕ್ಕ ಮಾಡಲಾಗುತ್ತಿತ್ತು. ಕಂದಾಯ ಒಂದು ಸಾವಿರ ರೂಪಾಯಿಗಳಿಗಿಂತ ಹೆಚ್ಚಾಗಿದ್ದಲ್ಲಿ ಈ ದರ ಕ್ರಮೇಣ ಕಡಿಮೆಯಾಗುತ್ತಿತ್ತು. ಕೆಲವು ಗ್ರಾಮಾಧಿಕಾರಿಗಳಿಗೆ ಭಾಗಶ: ಕಂದಾಯಮಾಫಿಯುಳ್ಳ ಇನಾಂ ಜಮೀನುಗಳು ಸೇವೆಯ ಪ್ರತಿಫಲವಾಗಿ ಕೊಡಲ್ಪಟ್ಟಿದ್ದವು. ಗ್ರಾಮದ ಕಿರಿಯ ಸೇವಕರಿಗೆ ಇನಾಂ ಭೂಮಿ ಇರುತ್ತಿತ್ತೇ ಹೊರತು ಪೋಟಗಿ ಇರುತ್ತಿರಲ್ಲಿಲ್ಲ. ಗ್ರಾಮಾಧಿಕಾರಿಗಳ ಪೋಟಗಿಯನ್ನು ಹತ್ತು ವರ್ಷಗಳಿಗೊಮ್ಮೆ ಪುನರ್ವಿಮರ್ಶಿಸಿ ನಿಗದಿ ಮಾಡಲಾಗುತ್ತಿತ್ತು.

	ಕಿರಿಯ ನೌಕರರಾದ ತಳವಾರ, ತೋಟಿ ಮುಂತಾದವರಿಗೆ ರೈತರಿಂದ ವಾರ್ಷಿಕವಾಗಿ ಧಾನ್ಯದ ಮಾಮೂಲು ಪಡೆಯುವ ಅಧಿಕಾರವೂ ಇತ್ತು. ಇದಕ್ಕೆ ಬಲೂತ, ಮಿರಾಸ್ - ಎನ್ನುತ್ತಿದ್ದರು. ಇವರಿಗೆ ಬಲೂತದಾರ, ಮಿರಾಸ್‍ದಾರ, ಬಾಬುದಾರ - ಎಂದೂ ಹೆಸರುಗಳಿದ್ದುವು. ಅಸಲು ವತನ್‍ದಾರ ಅಥವಾ ಅಸಲ್ದಾರ ಗೌಡ, ಕುಲಕರ್ಣಿಗಳು ಕೆಲಸದಲ್ಲಿ ಇರದಿದ್ದಾಗ ವೇತನದ ಮೇಲೆ ಗುಮಾಸ್ತರನ್ನು ನೇಮಿಸುವ ಅಧಿಕಾರ ಅವರಿಗೂ ಇತ್ತು, ಸರ್ಕಾರಕ್ಕೂ ಇತ್ತು.

	1953ರಲ್ಲಿ ಮುಂಬಯಿ ರಾಜ್ಯದ ಬೆಳಗಾಂ ವಿಭಾದಗಲ್ಲಿ ಅನುವಂಶಿಕ ಕುಲಕರ್ಣಿ ಹುದ್ದೆಯನ್ನು ಮೊದಲು ರದ್ದುಪಡಿಸಲಾಯಿತು. ಅವರ ಸ್ಥಾನದಲ್ಲಿ ಬಂದ ಹೊಸಬರಿಗೆ ತಲಾಟಿ ಎಂದು ಕರೆದರು. ಹಳೆಯ ಕುಲಕರ್ಣಿಗಳಿಗೆ ಇದ್ದ ಇನಾಂ ಜಮೀನುಗಳ ಕಂದಾಯದ ಆರು ಪಟ್ಟು ಹಣವನ್ನು ನಜರಾನಾ ಎಂದು ಸರ್ಕಾರ ಅವರಿಂದ ಪಡೆದು ಆ ಜಮೀನುಗಳು ಅವರ ಭೋಗದಲ್ಲಿಯೇ ಉಳಿಯುವಂತೆ ವ್ಯವಸ್ಥೆಯಾಯಿತು. ಕಳೆದುಕೊಂಡ ಪೋಟಗಿಗೆ ಪರ್ಯಾಯ ಹಣವನ್ನು ಸರ್ಕಾರ ಕೊಡಮಾಡಿತು.     

	ಭಾಷಾನುಗುಣ ರಾಜ್ಯ ಪುನರ್ವಿಂಗಡಣೆಗಾಗಿ, ವಿಶಾಲ ಮೈಸೂರು ರಾಜ್ಯ (ಕರ್ನಾಟಕ) ಆದ ಮೇಲೆ, ಅದರ ಐದು ಕನ್ನಡ ಘಟಕಗಳಲ್ಲೂ ಗ್ರಾಮಾಧಿಕಾರಿಗಳ ಬಗ್ಗೆ ಬೇರೆಬೇರೆ ಕಾಯಿದೆಗಳು, ವ್ಯವಸ್ಥೆಗಳು ಇದ್ದದ್ದನ್ನು ಗಮನಿಸಿ ಆನುವಂಶಿಕ ಹುದ್ದೆಗಳನ್ನು ನಿರ್ಮೂಲಮಾಡುವ ನಿರ್ಣಯವನ್ನು ಹೊಸ ಸರ್ಕಾರ ಕೈಗೊಂಡಿತು. 1961ರ ಮೈಸೂರು ಗ್ರಾಮಾಧಿಕಾರಿ ಹುದ್ದೆ ನಿರ್ಮೂಲ ಕಾಯಿದೆಯ 1ನೆಯ ಕಲಮಿನ ಪ್ರಕಾರ 1963ರ ಪೆಬ್ರುವರಿಯ ಪ್ರಾರಂಭದಿಂದ ಗ್ರಾಮಾಧಿಕಾರಿ ಹುದ್ದೆಗಳು ರದ್ದಾದವು. ಅದರೊಂದಿಗೆ ಪೋಟಗಿ, ಇನಾಂ ಜಮೀನುಗಳು, ಬಾಬು, ಬಲೂತ್ ಅಧಿಕಾರಗಳೆಲ್ಲ ನಿರ್ಮೂಲವಾದವು. ಆದರೆ ಜಮೀನುಗಳನ್ನು ಪುನಃ ಹಳೆಯ ಮಾಲೀಕರಿಗೆ ಕೆಲವು ಕರಾರುಗಳ ಮೇಲೆ ಬಿಟ್ಟುಕೊಡಲು ಮತ್ತು ಆ ವತನದಾರರಿಂದ ಪಡೆದುಕೊಂಡ ಹಕ್ಕಿಗೆ ಅವರಿಗೆ ಪ್ರತಿಫಲ ಕೊಡಲು ಕಾನೂನಿನಲ್ಲಿ ಅವಕಾಶ ಮಾಡಲಾಗಿದೆ. ಹೊಸ ವ್ಯವಸ್ಥೆ ನೆಲೆಗೊಳ್ಳುವವರೆಗೆ ಹಳಬರ ಸೇವಯನ್ನೂ ಆಗಿಂದಾಗ್ಗೆ ಮುಂದುವರಿಸಲಾಗಿದೆ.

	ಇನಾಂ ಭೂಮಿಯ ಹಕ್ಕನ್ನು ಸಂಪೂರ್ಣ ಪಟ್ಟಾ ಒಡೆತನಕ್ಕೆ ಪಡೆಯುವುದಕ್ಕಾಗಿ ಗೌಡ, ಕುಲಕರ್ಣಿಗಳು ಆ ಭೂಮಿಯ ಕಂದಾಯದ ಆರು ಪಟ್ಟು, ಕಿರಿಯ ಸೇವಕರು ಮೂರು ಪಟ್ಟು ಹಣವನ್ನು ಸರ್ಕಾರಕ್ಕೆ ಸಲ್ಲಿಸಿ ತಮ್ಮತಮ್ಮ ಜಮೀನುಗಳ ಮೇಲೆ ಪೂರ್ಣ ಸ್ವಾಮ್ಯ ಪಡೆಯಬಹುದು. ಈ ಹಣ ಸಲ್ಲಿಸದಿದ್ದರೆ ಅವರು ಜಮೀನು ಹಕ್ಕನ್ನು ಕಳೆದುಕೊಳ್ಳುತ್ತಾರೆ. ಸರ್ಕಾರ ವತನದಾರರ ಅನುವಂಶಿಕ ಹಕ್ಕನ್ನು ಕಸಿದುಕೊಂಡಿದ್ದಕ್ಕಾಗಿ ಅವರಿಗೆ ಪೋಟಗಿಯ ಆರು ಪಟ್ಟು ಪ್ರತಿಫಲ ನೀಡುತ್ತದೆ. ಭಾಗಶ: ಮಾಫಿ ಕಂದಾಯದ ಇನಾಂ ಜಮೀನು ಇದ್ದಲ್ಲಿ ಅದಾಯಾಂಶದ ಮತ್ತು ಪೂರ್ಣ ಕಂದಾಯದ ನಡುವಣ ವ್ಯತ್ಯಾಸದ ಆರು ಪಟ್ಟು ಹಣವನ್ನು ಪ್ರತಿಫಲವಾಗಿ ಕೊಡುತ್ತದೆ.  ಕಿರಿಯ ನೌಕರರಿಗೆ ಅವರ ಪಾರಂಪರಿಕ ವರಮಾನದ ಧನರೂಪದ ಆರು ಪಟ್ಟು ದೊರೆಯುತ್ತದೆ.

	ಹೀಗೆ, ಒಂದು ಕಡೆ ಭೂಮಿಯ ಮೇಲೆ ಸರ್ಕಾರದ ಪರಮಾಧಿಕಾರವನ್ನು ಸ್ಥಾಪಿಸುವ, ಇನ್ನೊಂದೆಡೆ ಅನುವಂಶಿಕ ಅಧಿಕಾರವನ್ನೂ ಒಪ್ಪಿಕೊಳ್ಳುವ ತತ್ತ್ವಗಳು ಸರ್ಕಾರದ ಈ ಕ್ರಮದಲ್ಲಿ ಅಡಗಿವೆ. ಪರಿಮಾರ್ಜನ ಹಣ ಮುಂತಾದ ವಿಷಯಗಳ ನಿರ್ಣಯದ ಅಧಿಕಾರವನ್ನೂ ಅಸಿಸ್ಟೆಂಟ್ ಕಮಿಷನರಿಗೆ ಕೊಡಲಾಗಿದೆ.

	ಹಳೆಯ ಗ್ರಾಮಾಧಿಕಾರಿಗಳ ಸ್ಥಾನದಲ್ಲಿ ಹೊಸಬರನ್ನು ನೇಮಿಸಿಕೊಳ್ಳಲು ಮೈಸೂರು ಸಾಮಾನ್ಯ ಸೇವಾ ಗ್ರಾಮಲೆಕ್ಕಿಗರ (ನೇಮಕ) ನಿಯಮಗಳು (1970) ಜಾರಿಯಲ್ಲಿ ಬಂದಿವೆ. ಇವುಗಳ ಪ್ರಕಾರ, ಐವತ್ತು ವರ್ಷಕ್ಕೆ ಮೀರದ, ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ ಹಳೆಯ ವತನದಾರರೂ ಹೊಸ ಹುದ್ದೆಗಳನ್ನು ಪಡೆಯಲರ್ಹರು. ಇತರ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸೇವಾನಿಯಮಗಳೇ ಇವರಿಗೂ ಅನ್ವಯವಾಗುತ್ತವೆ. ಅನುಸೂಚಿತ ಜಾತಿಗಳ ಮತ್ತು ಗಿರಿಜನ ಅಭ್ಯರ್ಥಿಗಳಿಗೆ ಈ ಸ್ಥಳಗಳಲ್ಲಿ ಹಲವನ್ನು ಕಾದಿಡಲಾಗುತ್ತದೆ. ಹನ್ನೆರಡು ಸಾವಿರ ರೂಪಾಯಿ ಕಂದಾಯದ ಪ್ರತಿಯೊಂದು ಗ್ರಾಮಪಂಚಾಯತಿಯ ಕ್ಷೇತ್ರಕ್ಕೂ ಒಬ್ಬ ಗ್ರಾಮಲೆಕ್ಕಿಗನನ್ನು ನೇಮಿಸಲಾಗುತ್ತದೆ. ಕಂದಾಯ ಅದಕ್ಕೆ ಮೀರಿದಲ್ಲಿ ಒಬ್ಬ ಸಹಾಯಕನನ್ನು ಕೊಡಲಾಗುವುದು. ಈ ಹೊಸ ಲೆಕ್ಕಿಗರಿಗೆ ತರಬೇತು ನೀಡುವ ವ್ಯವಸ್ಥೆಯನ್ನು ಕಾಯಿದೆಯಲ್ಲಿ ಮಾಡಲಾಗಿದೆ. ಇವರು ಪಂಚಾಯಿತಿಗಳಿಗೆ ಕಾರ್ಯದರ್ಶಿಗಳಾಗಿಯೂ ಕೆಲಸ ಮಾಡಬೇಕಾಗುತ್ತದೆ. ಹಳೆಯ ಗ್ರಾಮಾಧಿಕಾರಿ ಕುಲಕರ್ಣಿಯ ಎಲ್ಲ ಜವಾಬ್ದಾರಿಗಳೊಂದಿಗೆ ಹೊಸದಾಗಿ ಬಂದ ಎಲ್ಲ ಭೂಸಂಬಂಧಿ ಕಾಯಿದೆ ಕಾರ್ಯಗಳಿಗೂ ಲೆಕ್ಕಿಗ ಹೊಣೆಯಾಗಿರುತ್ತಾನೆ.

	ಮೈಸೂರು ಭೂಕಂದಾಯ ಕಾಯಿದೆಯಲ್ಲಿ (1964) ಸದ್ಯಕ್ಕೆ ಪಟೇಲ ಅಥವಾ ಗೌಡರನ್ನೂ ಗ್ರಾಮದ ಕಿರಿಯ ಸೇವಕರನ್ನೂ ನೇಮಿಸಿಕೊಳ್ಳಲು ಅವಕಾಶಮಾಡಿಲ್ಲ. ಪಟೇಲರನ್ನು ಸದ್ಯಕ್ಕೆ ಬೇರೆಯ ಕಾಯದೆಯ (ಪೊಲೀಸ್) ಪ್ರಕಾರ ಮತ್ತು ಆಡಳಿತಾತ್ಮಕ ಆಜ್ಞೆಗಳ ಪ್ರಕಾರ ಮುಂದುವರಿಸಲಾಗುತ್ತಿದೆ.									(ಜೆ.ಆರ್.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ